ಚೌ ಎನ್ - ಲೈ
1808-1976. ಚೀನ ಜನತಾ ಗಣರಾಜ್ಯದ ಪ್ರಧಾನಿ. ಚೀನೀ ಕಮ್ಯೂನಿಸ್ಟ್ ನಾಯಕರಲ್ಲೊಬ್ಬರು. ಜನನ 1898, ಜಿಯಾಂಗ್‍ಸೂ ಪ್ರಾಂತ್ಯದ ಹ್ವೆ-ಯಾನ್‍ನಲ್ಲಿ. ಟಿನ್‍ಟ್ಸಿನ್‍ನ ಅಮೆರಿಕನ್ ಮಿಷನರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವನು ಚಿಕ್ಕಂದಿನಲ್ಲೇ ಪಾಶ್ಚಾತ್ಯ ಸಾಮಾಜಿಕ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾದರು. 1919ರಲ್ಲಿ ಪೀಕಿಂಗಿನಲ್ಲಿ ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆಯಲ್ಲಿದ್ದರು. ಮುಂದಿನ ನಾಲ್ಕು ವರ್ಷ ಫ್ರಾನ್ಸ್, ಜಮ್ನಿಗಳಲ್ಲಿ ಚೀನೀ ವಿದ್ಯಾರ್ಥಿಗಳ ಜೊತೆಗೆ ರಾಜಕೀಯ ಕಲಾಪಗಳಲ್ಲಿ ನಿರತರಾಗಿದ್ದರು. ಪ್ಯಾರಿಸಿನಲ್ಲಿ ಪ್ರಥಮ ಕಮ್ಯೂನಿಸ್ಟ್ ಯುವಜನ ಪಡೆಯ ಸ್ಥಾಪಕರಿವರು. ಬಹುಶಃ ಸ್ವಲ್ಪ ಕಾಲ ಮಾಸ್ಕೋದಲ್ಲೂ ಇದ್ದು, ಕ್ರಾಂತಿಯ ತರಬೇತು ಪಡೆದು ಚೀನಕ್ಕೆ ಹಿಂದಿರುಗಿದರು.

	ಯೂರೋಪಿನಿಂದ ಹಿಂದಿರುಗಿದ ಅನಂತರ ಕ್ವೋಮಿನ್‍ಟಾಂಗ್ ಪಕ್ಷದ ಪ್ರಧಾನ ಕಚೇರಿ ಇದ್ದ ಕ್ಯಾಂಟಿನಿನ ಹ್ವಾಮ್‍ಪೋಪ ಸೈನಿಕ ಅಕಾಡೆಮಿಯಲ್ಲಿ ಸೋವಿಯೆತ್ ಸೈನಿಕ ಸಲಹೆಗಾರರಿಗೆ ಸಹಾಯಕರಾಗಿ ಚೀನೀ ಕಮ್ಯೂನಿಸ್ಟ್ ಪಕ್ಷ. ಕ್ವೋಮಿನ್‍ಟಾಂಗ್ ಪಕ್ಷ ಎರಡರಲ್ಲೂ ಇದ್ದರು. ಸನ್‍ಯಾತ್ ಸೆನ್‍ರೊಂದಿಗೆ ಕೆಲಸ ಮಾಡಿದರು. 1926ರಲ್ಲಿ ಚಿಯಾಂಗ್ ಕೈ-ಷೇಕರ ಪ್ರಥಮ ಸೇನೆಯಲ್ಲಿ ರಾಜಕೀಯ ಕಾಮಿಸಾರ್ ಆದರು. ಚೀನೀ ಕಮ್ಯೂನಿಸ್ಟ್ ಪಕ್ಷದ ಸೈನಿಕ-ರಾಜಕೀಯ ಅಧಿಕಾರಿಯಾಗಿಯೂ ಕಮ್ಯೂನಿಸ್ಟ್ ಪಕ್ಷಕ್ಕೂ ಕ್ವೋಮೀನ್‍ಟಾಂಗಿಗೂ ನಡುವಣ ಸಂಪರ್ಕ ಸಾಧಕರಾಗಿಯೂ ಇವರು ಆಗ ವಹಿಸಿದ ಪಾತ್ರ ಪ್ರಮುಖವಾದ್ದು. 1927ರಲ್ಲಿ ಷಾಂಗ್‍ಹೈ ಮತ್ತು ನ್ಯಾನ್‍ಚಂಗ್‍ಗಳಲ್ಲಿ ನಡೆದ ದಂಗೆಗಳಲ್ಲಿ ಚೌ ಭಾಗವಹಿಸಿದ್ದರೂ. ಕಮ್ಯೂನಿಸ್ಟ್ ಪಕ್ಷ ಬಹಿಷ್ಕøತವಾಯಿತು. ಮರಣದಂಡನೆಯಿಂದ ಚೌ ಎನ್-ಲೈ ಹೇಗೋ ತಪ್ಪಿಸಿಕೊಂಡರು.

	1927-30ರಲ್ಲಿ ಕ್ವೋಮಿನ್‍ಟಾಂಗ್ ವಿರುದ್ಧ ನಡೆದ ಅನೇಕ ದಂಗೆಗಳಲ್ಲಿ ಚೌ ಕೈವಾಡವಿತ್ತು. ಆದರೆ ಅವು ಸಫಲವಾಗಲಿಲ್ಲ. ಬಂಡಾಯ ಯಶಸ್ವಿಯಾಗದ್ದಕ್ಕಾಗಿ ಪಕ್ಷದಲ್ಲಿ ತೀವ್ರ ಟೀಕೆಗಳಾದವು. ನಾಯಕತ್ವದಲ್ಲಿ ಬದಲಾವಣೆಗಳಾದುವು. ಆದರೆ ಚೌ ಸ್ಥಾನಕ್ಕೆ ಚ್ಯುತಿ ಬರಲಿಲ್ಲ. 1931ರಲ್ಲಿ ಅವರು ದಕ್ಷಿಣದಲ್ಲಿ ಜಿಯಾಂಗ್‍ಸೀ ಪ್ರಾಂತ್ಯದಲ್ಲಿ ಮಾವೋತ್ಸೇ-ತುಂಗರನ್ನು ಕೂಡಿಕೊಂಡರು. ಒಂದು ಜೀವಮಾನದ ಸಖ್ಯ ಆರಂಭವಾಯಿತು. ಮಾವೋ ಪಕ್ಷದ ನಾಯಕತ್ವ ಗಳಿಸಲು ಬೆಂಬಲವಾಗಿ ನಿಂತವರಲ್ಲಿ ಚೌ ಪ್ರಮುಖರು. ಕ್ವೋಮಿನ್‍ಟಾಂಗ್ ಪ್ರಹಾರಗಳಿಂದ ತಮ್ಮ ನೆಲೆಯನ್ನು ರಕ್ಷಿಸುವ ಕಾರ್ಯದಲ್ಲಿ ಮಾವೋ ಒಂದಿಗೆ ನಿಂತರು. ಕೊನೆಗೆ ಕ್ವೋಮಿನ್ ಟಾಂಗ್ ವಿರುದ್ಧ ಕಾರ್ಯಾಚರಣೆಯಲ್ಲಿ ಇವರ ಪಕ್ಷ ಸೋಲು ಅನುಭವಿಸಿ ಜಿಯಾಂಗ್‍ಸೀ ಪ್ರಾಂತ್ಯದಿಂದ ಓಡಿಹೋಗಬೇಕಾಯಿತು. ವಾಯುವ್ಯ ಚೀನದ ಯೆನ್ನಾನ್ ಪ್ರಾಂತ್ಯಕ್ಕೆ ನಡೆಸಿದ ಚರಿತ್ರಾರ್ಹ ದೀರ್ಘಯಾತ್ರೆಯನ್ನು ಇವರು ಮಾವೋ ಒಂದಿಗೆ ಕೂಡಿ ನಿರ್ದೇಶಿಸಿದರು. ಅಲ್ಲಿ ಸ್ಥಾಪಿತವಾದ ಚೀನೀ ಸರ್ಕಾರದ ಪ್ರಮುಖ ವಕ್ತಾರರು ಚೌ ಎನ್-ಲೈ ಎಂಬುದು ಸ್ಥಿರವಾಯಿತು. 1936ರಿಂದ ಕ್ವೋಮಿನ್‍ಟಾಂಗ್ ಪಕ್ಷದೊಂದಿಗೆ ನಡೆದ ಸಂಧಾನದಲ್ಲಿ ಚೌ ಅವರದು ಪ್ರಮುಖ ಪಾತ್ರ. ಮುಂದೆ ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನೀ ಆಕ್ರಮಣಕಾರರನ್ನು ಒಗ್ಗಟ್ಟಿನಿಂದ ಎದುರಿಸಲು ಚಿಯಾಂಗರ ಮನಸ್ಸನ್ನು ಪರಿವರ್ತನೆಗೊಳಿಸುವ ಕಾರ್ಯದಲ್ಲೂ ಯಶಸ್ವಿಯಾದರು. 1949ರಲ್ಲಿ ಪೀಕಿಂಗಿನಲ್ಲಿ ಕಮ್ಯೂನಿಸ್ಟ್ ವಿಜಯ ಸಂಪೂರ್ಣವಾದಾಗ ಸ್ವಾಭಾವಿಕವಾಗಿಯೇ ಚೌ-ಎನ್-ಲೈ ಗೆ ನೂತನ ಗಣರಾಜ್ಯದ ಪ್ರಧಾನಿ ಮತ್ತು ವಿದೇಶಾಂಗ ಮಂತ್ರಿ ಪದವಿ ಪ್ರಾಪ್ತವಾಯಿತು. 1954ರಲ್ಲಿ ಇಂಡೊ ಚೀನ ಸಮಸ್ಯೆಯನ್ನು ಪರಿಶೀಲಿಸಲು ನಡೆದ ಜಿನೀವ ಸಮ್ಮೇಳನ, 1955ರಲ್ಲಿ ಇಂಡೋನೇಷ್ಯದ ಬಾಂಡುಂಗ್‍ನಲ್ಲಿ ನಡೆದ ಪ್ರಥಮ ಆಫ್ರೊ-ಏಷ್ಯನ್ ಸಮ್ಮೇಳನಗಳಲ್ಲಿ ಚೀನೀ ತಂಡದ ನಾಯಕರಾಗಿ ಭಾಗವಹಿಸಿದ ಚೌ ಈ ಸಮ್ಮೇಳನಗಳಲ್ಲಿ ಅನೇಕರ ಗಮನ ಸೆಳೆದರು.

	ಮುಂದೆ 1950ರ ದಶಕದ ಉತ್ತರ ಭಾಗದಲ್ಲಿ ಮತ್ತು 1960ರ ಆದಿಭಾಗದಲ್ಲಿ ಚೌ ಸ್ಥಾನಕ್ಕೆ ಧಕ್ಕೆ ಒದಗುವ ಅಪಾಯವಿತ್ತು. ಮಾವೋರ ಉತ್ತರಾಧಿಕಾರಿಯಾಗ ಬಯಸಿದ ಲಿನ್ ಪಿಯಾವೋ ರೆಡ್‍ಗಾರ್ಡ್ ಚಳವಳಿ ಮತ್ತು ಸಾಂಸ್ಕøತಿಕ ಕ್ರಾಂತಿಗಳನ್ನು ಪ್ರಚೋದಿಸಿದರು. ಲಿಯೋಶಾವೋ ಚಿ ಮುಂತಾದ ಹಳೆಯ ನಾಯಕರ ಸ್ಥಾನಪಲ್ಲಟವಾಯಿತು. ಚೌ ಭವಿಷ್ಯದ ಬಗ್ಗೆ ಕಳವಳವಿತ್ತು. ಆದರೆ ಚೌ ರಾಜಕೀಯ ನಿಪುಣತೆಯಿಂದಾಗಿ ಅವರ ಸ್ಥಾನ ಭದ್ರವಾಗಿ ಉಳಿಯಿತು. ಸಿದ್ಧಾಂತದ ಬಗ್ಗೆ ಅಭಿಪ್ರಾಯ ನೀಡುವ ಹೊಣೆಯನ್ನು ಇತರರಿಗೆ ಬಿಟ್ಟು ಅದರ ಸಮರ್ಥನೆಗಾಗಿ ಶ್ರಮಿಸುವು ಚೌ ನೀತಿಯೆಂದು ಆದ್ದರಿಂದಲೇ ಅವರು ಮಾವೋಗೆ ಎರಡನೆಯವರಾಗಿ ಉಳಿದ್ದಾರೆಂದೂ ವೈಯಕ್ತಿಕ ಆಕಾಂಕ್ಷೆಗಳಿಲ್ಲದೆ ಪಕ್ಷಕ್ಕಾಗಿ ದುಡಿಯುತ್ತ, ಬುದ್ಧಿಜೀವಿಗಳು ಮತ್ತು ಕ್ರಾಂತಿವಾದಿಗಳಿಬ್ಬರನ್ನೂ ಓಲೈಸುತ್ತ ಚೌ ಸಾಗಿರುವ ಮಾರ್ಗ ಅವರ ಕೌಶಲವನ್ನು ತೋರಿಸುತ್ತದೆಯೆಂದೂ ಹೇಳಲಾಗಿದೆ. ಹೀಗೆಯೇ ವಿದೇಶಾಂಗ ವ್ಯವಾಹಾರದಲ್ಲಿ ಇವರ ನಾಯಕತ್ವದಲ್ಲಿ ಆದ ಇನ್ನೊಂದು ಸಾಧನೆ ಗಮನಾರ್ಹ. ಅದು ಚೀನ-ಅಮೆರಿಕ ಸಂಬಂಧದ ಸುಧಾರಣೆ. ವಿಯಟ್ನಾಂ ಯುದ್ಧ ಮತ್ತು ನಿಲುಗಡೆ, ವಿಶ್ವಸಂಸ್ಥೆಗೆ ಚೀನದ ಪ್ರವೇಶ. ಅದರ ಭದ್ರತಾ ಸಮಿತಿಯಲ್ಲಿ ಅದಕ್ಕೆ ಸದಸ್ಯತ್ವ ಇವು ಇವರ ಅಧಿಕಾರ ಕಾಲದಲ್ಲಿ ನಡೆದ ಮುಖ್ಯ ಘಟನೆಗಳು. ಚೀನ-ಭಾರತ ಸಂಬಂಧ ಹದಗೆಟ್ಟು, ಗಡಿಯ ವಿಚಾರವಾಗಿ ಈ ಎರಡು ದೇಶಗಳ ನಡುವೆ ಘರ್ಷಣೆ ನಡೆದದ್ದೂ (1962) ಇವರ ಕಾಲದಲ್ಲೇ. 1972ರಲ್ಲಿ ಚೀನಕ್ಕೆ ಪ್ರಥಮವಾಗಿ ಭೇಟಿ ಕೊಟ್ಟ ಅಮೆರಿಕಾ ಅಧ್ಯಕ್ಷರಾದ ರಿಚರ್ಡ್ ಎಮ್‍ನಿಕ್ಸನ್‍ರವರು ಚೌ-ಎನ್-ಲೈ ಜೊತೆ ಚರ್ಚಿಸಿದರು. ಇವರು 1976ರಲ್ಲಿ ನಿಧನ ಹೊಂದಿದರು.								 (ಎಂ.ಯು.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ